ಶಿವಮೂರ್ತಿಶಾಸ್ತ್ರೀ, ಬಿ
	1903-76. ಸಂಸ್ಕøತ ಹಾಗೂ ಕನ್ನಡ ವಿದ್ವಾಂಸರು. ಕರ್ನಾಟಕದ ಏಕೀಕರಣಕ್ಕಾಗಿ ಕರ್ನಾಟಕದಲ್ಲೆಲ್ಲ ಸುತ್ತಿ ಜನತೆಯನ್ನು ಎಚ್ಚರಿಸಿದವರು. ಸಾಹಿತ್ಯ ಸಂಶೋಧನೆ, ಪತ್ರಿಕೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ದುಡಿದವರು. 1903 ಫೆಬ್ರವರಿ 2ರಂದು ಜನಿಸಿದರು. ತಂದೆ ಹುಲಿ ಕುಂಟೆ ಮಠದ ಬಸವಯ್ಯ ಸ್ವಾಮಿ, ತಾಯಿ ನೀಲಮ್ಮ. ಬಾಲ್ಯದ ವಿದ್ಯಾಭ್ಯಾಸ ತುಮಕೂರಿನಲ್ಲಿ ನಡೆಯಿತು. 1917ರಲ್ಲಿ ಕನ್ನಡ ಮುಲ್ಕಿ ಪರೀಕ್ಷೆಯಲ್ಲೂ 1923ರಲ್ಲಿ ಅಪ್ಪರ್ ಸೆಕೆಂಡರಿ ಪರೀಕ್ಷೆ ಯಲ್ಲೂ ತೇರ್ಗಡೆಯಾದರು. ಮತ್ತೆ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಗುಬ್ಬಿಯ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ 1924-25ರಲ್ಲಿ ಅಧ್ಯಾಪಕರಾಗಿದ್ದರು. ಆರು ವರ್ಷಗಳ ಕಾಲ ಪಿ.ಆರ್.ಕರಿಬಸವಶಾಸ್ತ್ರಿಗಳ ಶಿಷ್ಯರಾಗಿದ್ದುಕೊಂಡು ಕನ್ನಡ ಮತ್ತು ಸಂಸ್ಕøತ ಸಾಹಿತ್ಯ ಹಾಗೂ ಧರ್ಮಗ್ರಂಥಗಳ ನಿಕಟ ಪರಿಚಯ ಪಡೆದರು. ಮಾಗಡಿಯ ವೀರಪ್ಪಶಾಸ್ತ್ರೀ ಮತ್ತು ಮೈಸೂರಿನ ಶಿವಪ್ಪಶಾಸ್ತ್ರೀ ಇವರ ಪ್ರೋತ್ಸಾಹದಿಂದಾಗಿ ಕೀರ್ತನಕಲೆಯಲ್ಲಿ ತೀವ್ರ ಆಸಕ್ತಿಯುಂಟಾಗಿ ಕರ್ನಾಟಕದಲ್ಲಿ ಏಕೀಕರಣ ಕುರಿತಂತೆ ಅನೇಕ ಕೀರ್ತನೆಗಳನ್ನು ರಚಿಸಿ, ಕರ್ನಾಟಕದಲ್ಲೆಲ್ಲ ಸಂಚರಿಸಿ ಹಾಡಿದರು. ಒಳ್ಳೆಯ ಕೀರ್ತನಕಾರರೆಂದು ಹೆಸರು ಪಡೆದರು. ಕೀರ್ತನಕಲೆಯ ಜೊತೆಗೆ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕನ್ನಡ ಸಾಹಿತ್ಯ ಮತ್ತು ವೀರಶೈವ ಧರ್ಮಗಳನ್ನು ಕುರಿತು ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಶರಣಸಾಹಿತ್ಯ ಗ್ರಂಥಮಾಲೆಯನ್ನು ಆರಂಭಿಸಿ 35ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿದರು. ನಿಜಗುಣರ ಪುರಾತನ ತ್ರಿವಿಧಿ, ರಾಘವಾಂಕನ ವೀರೇಶಚರಿತೆ, ಕೊಂಡಗುಳಿ ಕೇಶಿರಾಜನ ಷಡಕ್ಷರ ಮಂತ್ರ ಮಹಿಮೆ, ಗುರುಸಿದ್ಧನ ಮಾದೇಶ್ವರ ಸಾಂಗತ್ಯ ಮೊದಲಾದವು ಇವರು ಸಂಪಾದಿಸಿದ ಕೃತಿಗಳು. ವೀರಶೈವ ಸಾಹಿತ್ಯ ಮತ್ತು ಇತಿಹಾಸ, ವೀರಶೈವ ಮಹಾಪುರುಷರು, ಕರ್ನಾಟಕ ಸಂದರ್ಶನ ಮೊದಲಾದವು ಇವರ ಸ್ವಂತ ಕೃತಿಗಳು. 1936ರಲ್ಲಿ ಮೈಸೂರಿನ ಮಹಾರಾಜರ ಆಸ್ಥಾನ ವಿದ್ವಾಂಸರಾದರು. 1939ರಲ್ಲಿ ಶರಣಸಾಹಿತ್ಯ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಅದನ್ನು 1972ರ ತನಕ ನಡೆಸಿಕೊಂಡುಬಂದರು. 1939ರಲ್ಲಿ ಸ್ವತಂತ್ರ ಕರ್ನಾಟಕ ಎಂಬ ವಾರಪತ್ರಿಕೆಯನ್ನು ಆರಂಭಿಸಿ 1944ರ ತನಕ ನಡೆಸಿದರು. 1946ರಲ್ಲಿ ಕನ್ನಡನುಡಿಗೂ 1957-62ರ ತನಕ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಗೂ ಸಂಪಾದಕರಾಗಿದ್ದರು. 1948ರಲ್ಲಿ ಆಗಿನ ಮೈಸೂರು ಮಹಾರಾಜರಿಂದ ಇವರಿಗೆ ಪಂಡಿತರತ್ನ ಪ್ರಶಸ್ತಿ ದೊರಕಿತು.  1956-64ರ ತನಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಇವರ ಕಾಲದಲ್ಲಿ ಕನ್ನಡ-ಕನ್ನಡ ನಿಘಂಟಿನ ಕಾರ್ಯ ಹಾಗೂ ಪರಿಷತ್ತಿನ ಕಾರ್ಯಕಲಾಪಗಳು ಉತ್ತಮಗೊಂಡವು.

	ಇವರ ನಾಡುನುಡಿಯ ಸೇವೆಯನ್ನು ಗಮನಿಸಿದ ಅನೇಕ ಸಂಘಸಂಸ್ಥೆ ಗಳು ಇವರನ್ನು ಸನ್ಮಾನಿಸಿವೆ. 1966ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಇವರ ಅಭಿಮಾನಿಗಳು ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿದರು(1968). ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟೊರೇಟ್ ನೀಡಿತು(1975). ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದ ಸಂಪಾದಕ ಮಂಡಳಿಯ ಸದಸ್ಯರೂ ಆಗಿದ್ದರು (1968-76) ಇವರು 1976 ಜನವರಿ 15ರಂದು ಬೆಂಗಳೂರಿನಲ್ಲಿ ನಿಧನರಾದರು.    
				
		(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ